ಡೆ ವ್ಯಲೇರ, ಏಮನ್
ಐರ್ಲೆಂಡಿನ ನಾಯಕ, ರಾಜನೀತಿಜ್ಞ. ಐರ್ಲೆಂಡ್ ಗಣರಾಜ್ಯದ ಅಧ್ಯಕ್ಷ. 1882ರ ಅಕ್ಟೋಬರ್ 14ರಂದು ನ್ಯೂಯಾರ್ಕ್ ನಗರದಲ್ಲಿ ಜನಿಸಿದರು. ತಂದೆ ಸ್ಟ್ಯಾನಿಷ್ ಕಲಾವಿದ. ತಾಯಿ ಐರ್ಲೆಂಡಿನವಳು. ಇವರಿಗೆ ಎರಡು ವರ್ಷ ವಯಸ್ಸಾಗಿದ್ದಾಗ ತಂದೆ ತೀರಿಕೊಂಡ. ಅಮೆರಿಕದಲ್ಲಿ ತಾಯಿಯ ತವರುಮನೆಯಲ್ಲಿ ಅಜ್ಜಿಯ ಬಳಿ ಇವರು ಬೆಳೆದರು. ಇವರು ರೋಮನ್ ಕ್ಯಾತೊಲಿಕರು. ಸ್ಥಳೀಯ ರಾಷ್ಟ್ರೀಯ ಶಾಲೆಯಲ್ಲೂ ಡಬ್ಲಿನಿನ ಬ್ಲಾಕ್‍ರಾಕ್ ಕಾಲೇಜಿನಲ್ಲೂ ವ್ಯಾಸಂಗಮಾಡಿ ರಾಯಲ್ ವಿಶ್ವವಿದ್ಯಾಲಯದಲ್ಲಿ (ಈಗ ಇದು ಐರಿಷ್ ರಾಷ್ಟ್ರೀಯ ವಿಶ್ವವಿದ್ಯಾಲಯ) ಪದವಿ ಪಡೆದು ಗಣಿತಶಾಸ್ತ್ರದ ಅಧ್ಯಾಪಕರಾದರು. ಐರಿಷ್ ಭಾಷೆಯ ಪುನರುತ್ಥಾನದಲ್ಲಿ ಇವರಿಗೆ ವಿಶೇಷವಾದ ಆಸಕ್ತಿಯಿತ್ತು. ಹಲವು ವರ್ಷ ಐರಿಷ್ ಭಾಷೆಯ ಅಧ್ಯಯನ ಮಾಡಿದರಲ್ಲದೆ ಗೇಲಿಕ್ ಲೀಗಿನ ಸಕ್ರಿಯ ಸದಸ್ಯರಾಗಿದ್ದರು. ಗೇಲಿಕ್ ಭಾಷೆಯ ಉಪಾಧ್ಯಾಯಿನಿಯಾಗಿದ್ದ ಪ್ಲಾನಗೇನರನ್ನು 1910ರಲ್ಲಿ ವಿವಾಹವಾದರು. ಅವರಿಗೆ ನಾಲ್ವರು ಪುತ್ರರು, ಇಬ್ಬರು ಪುತ್ರಿಯರು.

ಆಗ ಐರ್ಲೆಂಡ್ ಬ್ರಿಟನ್ನಿನ ಅಧೀನದಲ್ಲಿತ್ತು. ಅದರ ವಿರುದ್ಧ ಹೋರಾಡಲು 1913ರಲ್ಲಿ ಭೂಗತ ಸೇನೆಯ ಸ್ವಯಂಸೇವಕರಾಗಿ ಸೇರಿಕೊಂಡರು. 1915-16ರಲ್ಲಿ ಡಬ್ಲಿನ್ ಬ್ರಿಗೇಡಿನ ಅಡ್ಜುಟಂಟರಾಗಿದ್ದರು. 1916ರ ಈಸ್ಟರ್ ಸಮಯದಲ್ಲಿ ನಡೆಸಿದ ಐರಿಷ್ ರಾಷ್ಟ್ರೀಯ ಬಂಡಾಯದಲ್ಲಿ 50 ಜನರ ತಂಡವೊಂದಕ್ಕೆ ನಾಯಕರಾಗಿದ್ದರು. ಈ ಬಂಡಾಯ ಫಲಿಸಲಿಲ್ಲ. ಎಲ್ಲರಿಗಿಂತ ಕೊನೆಯಲ್ಲಿ ಸಿಕ್ಕಿಬಿದ್ದ ನಾಯಕರು ಇವರು. ಇವರಿಗೆ ಮರಣದಂಡನೆ ವಿಧಿಸಲಾಯಿತು. ಆದರೆ ಅಮೆರಿಕದಲ್ಲಿ ಹುಟ್ಟಿದವರೆಂಬ ಕಾರಣದಿಂದ ಇದನ್ನು ಜೀವಾವಧಿ ಶಿಕ್ಷೆಗೆ ಪರಿವರ್ತಿಸಲಾಯಿತು.

1917ರ ಸಾರ್ವತ್ರಿಕ ಕ್ಷಮಾದಾನದ ಪರಿಣಾಮವಾಗಿ ಇವರು ಬಿಡುಗಡೆ ಹೊಂದಿದರು. ಬಂಡಾಯದಲ್ಲಿ ಬದುಕಿ ಉಳಿದ ಮುಖ್ಯ ನಾಯಕರೆಂದು ಇವರ ಕೀರ್ತಿ ಹೆಚ್ಚಿತು. ಷಿನ್‍ಫೇನ್ ಪಕ್ಷಕ್ಕೆ ಇವರು ಅಧ್ಯಕ್ಷರಾಗಿ ಆಯ್ಕೆಯಾದರು. 1918ರಲ್ಲಿ ನಡೆದ ಚುನಾವಣೆಗಳಲ್ಲಿ ಈ ಪಕ್ಷ ಐರಿಷ್ ಕ್ಷೇತ್ರಗಳಲ್ಲಿ ಮುಕ್ಕಾಲು ಭಾಗದ ಸ್ಥಾನಗಳನ್ನು ಪಡೆದುಕೊಂಡಿತು. ಇವರೂ ಪಾರ್ಲಿಮೆಂಟಿಗೆ ಆಯ್ಕೆಯಾದರು. 1918ರಲ್ಲಿ ಇವರನ್ನು ಮತ್ತೆ ದಸ್ತಗಿರಿ ಮಾಡಿ ಇಂಗ್ಲೆಂಡಿಗೆ ಸಾಗಿಸಲಾಯಿತು. ಮರುವರ್ಷ ಇವರು ಅದ್ಭುತವಾದ ರೀತಿಯಲ್ಲಿ ಲಿಂಕನ್ ಸೆರೆಮನೆಯಿಂದ ತಪ್ಪಿಸಿಕೊಂಡರು. ವೇಷಮರೆಸಿಕೊಂಡು ಅಮೆರಿಕಕ್ಕೆ ಹೋಗಿ, ತಮ್ಮ ಹೋರಾಟಕ್ಕಾಗಿ ನಿಧಿ ಸಂಗ್ರಹಿಸಿ ಐರ್ಲೆಂಡಿಗೆ ಹಿಂದಿರುಗಿದರು. 1921ರ ಒಪ್ಪಂದದೊಂದಿಗೆ ಸೇನಾ ದಬ್ಬಾಳಿಕೆ ಕೊನೆಗೊಂಡಿತು. ಉತ್ತರ ಐರ್ಲೆಂಡನ್ನು ಪ್ರತ್ಯೇಕಿಸುವ, ಮತ್ತು ಬ್ರಿಟಿಷ್ ದೊರೆಗೆ ವಿಧೇಯತೆಯ ಪ್ರತಿe್ಞÁವಚನ ಸ್ವೀಕರಿಸಬೇಕೆಂಬ ವಿಧಿಗಳಿಗೆ ಸಮ್ಮತಿಸದೆ ಇವರು ಆ ಒಪ್ಪಂದವನ್ನು ನಿರಾಕರಿಸಿದರು. ಐರಿಷ್ ವಿಧಾನಸಭೆ ಈ ಒಪ್ಪಂದವನ್ನು ಅಲ್ಪ ಬಹುಮತದೊಡನೆ ಒಪ್ಪಿಕೊಂಡಿತು. ಅನಂತರ ಸಂಭವಿಸಿದ ಅಂತರ್ಯುದ್ಧದಲ್ಲಿ ಡೆ ವ್ಯಲೇರರು ರಿಪಬ್ಲಿಕನರ ಹೋರಾಟಕ್ಕೆ ಬೆಂಬಲ ನೀಡಿದರು. ಕಾಸ್‍ಗ್ರೇವರ ಐರಿಷ್ ಸ್ವತಂತ್ರ ರಾಜ್ಯ ಸರ್ಕಾರ ಇವರನ್ನು ಬಂಧಿಸಿತು. 1923ರಲ್ಲಿ ಇವರು ಬಿಡುಗಡೆ ಹೊಂದಿದರು. ಹೊಸದೊಂದು ಪಕ್ಷವನ್ನು (ಫೀಯನ ಫಾಲ್) ಸಂಘಟಿಸಿದರು (1926). ಅಲ್ಲಿಯ ಪಾರ್ಲಿಮೆಂಟಿನಲ್ಲಿ ವಿರೋಧ ಪಕ್ಷದ ನಾಯಕರಾಗಿದ್ದರು. ಕಾಸ್‍ಗ್ರೇವ್ ಸರ್ಕಾರಕ್ಕೆ ಸೋಲಾದಾಗ (1932) ಡೆ ವ್ಯಲೇರರು ಸರ್ಕಾರ ರಚಿಸಿ ಬ್ರಿಟನಿನೊಂದಿಗೆ ಸಂಪರ್ಕವನ್ನು ಕಡಿದುಹಾಕಿದರು. ಬ್ರಿಟನಿಗೆ ಕೊಡುತ್ತಿದ್ದ ವಾರ್ಷಿಕ ವಂತಿಗೆಯನ್ನು ನಿಲ್ಲಿಸಿದರು. ಬ್ರಿಟನಿಗೂ ಐರಿಷ್ ಸ್ವತಂತ್ರರಾಜ್ಯಕ್ಕೂ ಆರ್ಥಿಕ ಯುದ್ಧ ಮೊದಲಾಯಿತು. ದೇಶವನ್ನು ಸ್ವಾವಲಂಬಿಯಾಗಿ ಮಾಡುವ ಯೋಜನೆಗಳು ಜಾರಿಗೆ ಬಂದುವು. 1937ರಲ್ಲಿ ಐರಿಷ್ ಸ್ವತಂತ್ರ ರಾಜ್ಯ ಪರಮಾಧಿಕಾರವನ್ನು ಘೋಷಿಸಿಕೊಂಡು, ಐರ್ಲೆಂಡ್ ಅಥವಾ ಏರ್ ಎಂದು ಕರೆದುಕೊಂಡಿತು. ಆದರೆ ಸ್ವಇಚ್ಛೆಯಿಂದ ಬ್ರಿಟಿಷ್ ದೊರೆಗೆ ವಿಧೇಯತೆಯಿಂದಿರಲು ಒಪ್ಪಿಕೊಂಡಿತು.

1932ರಲ್ಲಿ ಇವರು ರಾಷ್ಟ್ರಗಳ ಕೂಟದ (ಲೀಗ್ ಆಫ್ ನೇಷನ್ಸ್) ಸಮಿತಿಗೂ 1938ರಲ್ಲಿ ಅದರ ಸಭೆಗೂ ಅಧ್ಯಕ್ಷರಾದರು. ಇವರ ಗೌರವ ಹೆಚ್ಚಿತು. ಯೂರೋಪಿನಲ್ಲಿ ಯುದ್ಧಭಯ ಅಧಿಕವಾಗುತ್ತಿದ್ದಾಗ 1938ರಲ್ಲಿ ಬ್ರಿಟನಿನ ಪ್ರಧಾನಿ ಚೇಂಬರ್ಲಿನರು ಐರ್ಲೆಂಡಿನೊಂದಿಗೆ ಆರ್ಥಿಕ ಯುದ್ಧವನ್ನು ಕೊನೆಗೊಳಿಸಿದರು. 1939ರಲ್ಲಿ ಎರಡನೆಯ ಮಹಾಯುದ್ಧ ಆರಂಭವಾದಾಗ ಐರ್ಲೆಂಡ್ ತಟಸ್ಥ ರಾಷ್ಟ್ರವಾಗಿ ಉಳಿಯಿತು. ಇದರಿಂದ ಯುದ್ಧದ ಆಘಾತದಿಂದ ತಪ್ಪಿಸಿಕೊಳ್ಳುವಂತಾಯಿತಲ್ಲದೆ, ದೇಶವನ್ನು ಅಭಿವೃದ್ಧಿಗೊಳಿಸುವುದು ಸಾಧ್ಯವಾಯಿತು. ಇವರ ಜನಪ್ರಿಯತೆ ಹೆಚ್ಚಿತು. ಇವರು ಪದೇಪದೇ ಚುನಾವಣೆಗಳಲ್ಲಿ ಜಯ ಗಳಿಸಿದರು. ಇವರ ಪಕ್ಷವೇ ಬಹುಕಾಲ ಅಧಿಕಾರದಲ್ಲಿದ್ದುದರಿಂದ ವಿರೋಧ ಪಕ್ಷಗಳು ಒಂದಾಗಿ ಕಾಸ್ಟೆಲೋ ನಾಯಕತ್ವದಲ್ಲಿ ಸಂಮಿಶ್ರ ಸರ್ಕಾರ ರಚಿಸಿದುವು. ಆದರೆ ಮೂರು ವರ್ಷಗಳಲ್ಲಿ ಇದು ಕುಸಿಯಿತು. 1954ರ ವರೆಗೆ ಮತ್ತೆ ಡೆ ವ್ಯಲೇರ ಅಧಿಕಾರ ನಡೆಸಿದರು. ಚುನಾವಣೆಯಲ್ಲಿ ಇವರ ಪಕ್ಷಕ್ಕೆ ಮತ್ತೆ ಬಹುಮತ ಬರಲಿಲ್ಲ. ವಿರೋಧ ಪಕ್ಷಗಳು ಮತ್ತೆ ಸಂಮಿಶ್ರ ಸರ್ಕಾರ ರಚಿಸಿದುವು. 1957ರಲ್ಲಿ ಇವರಿಗೆ ಮತ್ತೆ ಬಹುಮತ ದೊರಕಿತು. 1959ರಲ್ಲಿ ಇವರು ಅಧ್ಯಕ್ಷರಾಗಿ ಚುನಾಯಿತರಾಗಿ, 1973ರ ವರೆಗೆ ಮುಂದುವರಿದರು. ಇವರು 1921ರಲ್ಲಿ ಐರ್ಲೆಂಡಿನ ರಾಷ್ಟ್ರೀಯ ವಿಶ್ವವಿದ್ಯಾಲಯದ ಕುಲಾಧಿಪತಿಗಳಾದರು. ರಾಷ್ಟ್ರನಿಷ್ಠೆ, ಪ್ರಾಮಾಣಿಕತೆ, ಆತ್ಮಸ್ಥೈರ್ಯಗಳು ಇವರ ಮಹಾಗುಣಗಳು. ಡೆ ವ್ಯಲೇರ 1975ರಲ್ಲಿ ತೀರಿಕೊಂಡರು.  (ಎಂ.ಆರ್.ಎ.ಡಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ